The shloka that had come up for discussion last month was again from the 4th chapter of the bhagavadgita
shraddhavallabhate jnanam
tat-parah samyatendriyah
jnanam labdhva param shantim
acirenadhigacchati 4.39
"A faithful man who is dedicated to transcendental knowledge and who subdues his senses is eligible to achieve such knowledge, and having achieved it he quickly attains the supreme spiritual peace."
These are some of the points which I spoke upon. (date: April 5th 2009)*****************************************
ಇದರ ಹಿಂದಿನ ೩ ಶ್ಲೋಕದಲ್ಲಿ ಕೃಷ್ಣನು ಮೋಹವನ್ನು ಗೆಲ್ಲುವ ಸಾಧನ ಜ್ಞಾನ ಎಂದು ಹೇಳಿ, ಜ್ಞಾನದ ಪ್ರಶಂಸೆ ಮಾಡುತ್ತಾನೆ
’ಯಜ್ಞಾತ್ವಾ ನ ಪುನರ್ಮೋಹಂ ಎವಂ ಯಾಸ್ಯಸಿ ಪಾಂಡವ..’
ಪರಮ ಪಾಪಿಯಾಗಿದ್ದರು ಜ್ಞಾನ ನೌಕೆಯ ಮೂಲಕ ದಾಟಬಹುದು ಎಂದೂ, ಬೆಂಕಿಯು ಹೇಗೆ ಭಸ್ಮ ಮಾಡುತ್ತದೆಯೋ ಹಾಗೆಯೇ ಜ್ಞಾನವು ಕರ್ಮ ರಾಶಿಯನ್ನು ಭಸ್ಮ ಮಾಡುತ್ತದೆ ಎಂದು ಹೇಳುತ್ತಾನೆಮತ್ತೂ ಜ್ಞಾನದಷ್ಟು ಪವಿತ್ರ ವಸ್ತು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಹೇಳುತ್ತಾನೆ.
ಪ್ರಸ್ತುತ ಈ ಶ್ಲೋಕದಲ್ಲಿ -- ಜ್ಞಾನ ಪಡೆಯುವ ದಾರಿ ಯಾವುದು? ಜ್ಞಾನ ಸಾಧನವಾವುದು? ಅದರ ಫಲವೇನು? ಎಂಬುದನ್ನು ಹೇಳುತ್ತಾನೆ
ಇದರ ಮುಂದಿನ ಶ್ಲೋಕದಲ್ಲಿ ಅಜ್ಞಾನ-ವಿಪರೀತ ಜ್ಞಾನ ಯಾವುದು? ಹೇಗೆ ಬರುತ್ತದೆ? ಮತ್ತು ಅದರ ಫಲವೇನು? ಎಂಬುದನ್ನು ಹೇಳುತ್ತಾನೆ
ಜ್ಞಾನ ಸಾಧನವೇನು? ಈ ಜ್ಞಾನ ಯಾರಿಗೆ ಸಿಗುತ್ತದೆ? ಎಂಬುದಕ್ಕೆ -- ಶ್ರದ್ಧಾವಾನ್ ಮತ್ಪರಃ ಸಂಯತೇದ್ರಿಯಃ
ಯಾರಿಗೆ ಶ್ರದ್ಧೆ ಇದೆಯೋ, ಯಾರಿಗೆ ನನ್ನ ಮೇಲೆ ನಿಷ್ಠೆ ಇದೆಯೋ, ಮತ್ತು ಯಾರು ಜಿತೇಂದ್ರಿಯನೋ - ಇಂದ್ರಿಯ ನಿಗ್ರಹ ಮಾಡಿರುವನೋ ಅವನಿಗೆ ಜ್ಞಾನ ಸಿಗುತ್ತದೆ
(ಬಹಳಷ್ಟು ಗೀತೆಯ ಪುಸ್ತಕಗಳಲ್ಲಿ ’ಮತ್ಪರಃ’ ಬದಲು ’ತತ್ಪರಃ’ ಎಂದು ಇದೆ. ಪ್ರಾಯಶಃ ಪಾಠಾಂತರಗಳು. ಇಲ್ಲಿ ಮಂತ್ರಾಲಯದ ರಾಘವೆಂದ್ರ ಸ್ವಾಮಿಗಳ ’ಗೀತ ವಿವೃತ್ತಿ’ಯ ಪಾಠವನ್ನು ಪರಿಗಣಿಸಲಾಗಿದೆ)
ಶ್ರದ್ಧಾವಾನ್ ಎಂದರೆ ಆಸ್ತಿಕ ಬುದ್ಧಿಯುಳ್ಳವನು ಎಂದೂ ಅರ್ಥವಿದೆ;
ಶ್ರದ್ಧಾವಾನ್ ಆಸ್ತಿಕ್ಯ ಬುದ್ಧಿಮಾನ್
ಮತ್ಪರಃ ಮದೇಕನಿಷ್ಠಃ
ಸಂಯತೇಂದ್ರಿಯೋ ಜಿತೇಂದ್ರಿಯಶ್ಚ
ಪರಾಂ ಶಾಂತಿಂ ಅಚಿರೇಣ ಅಧಿಗಚ್ಛತಿ
ಮೋಕ್ಷ ಸಿಗುತ್ತದೆ - ಆದಷ್ಟು ಬೇಗ ಸಿಗುತ್ತದೆ; ಎಂದು ಕೃಷ್ಣ ಹೇಳುತ್ತಾನೆ ಪ್ರಾರಬ್ಧವಿಲ್ಲದಿದ್ದರೆ ತಕ್ಷಣ ಸಿಗುತ್ತದೆ ಮತ್ತು ಪ್ರಾರಬ್ಧ ಕರ್ಮ (ಫಲ) ಇನ್ನೂ ಮಿಕ್ಕಿದ್ದರೆ, ಅದು ಮುಗಿದ ನಂತರ ಮೋಕ್ಷ ಸಿಗುತ್ತದೆ ಎಂಬುದು ಕೃಷ್ಣನ ನುಡಿ.
ನಮಗೆಲ್ಲ ರಾಜ ಅಂಬರೀಷನ ಕಥೆ ಗೊತ್ತಿದೆ. ಪರಮ ಭಾಗವತನಾದ ಆತನು, ಒಮ್ಮೆ ದ್ವಾದಶಿ ವ್ರತ ಸಾಧನೆ ಮಾಡಬೇಕು ಎಂದು ಒಂದು ವರುಷ ವ್ರತ ಮಾಡಿದನು. ಜಿತೇಂದ್ರಿಯನಾಗಿ (ಇಂದ್ರಿಯ ನಿಗ್ರಹ ಮಾಡಿ) ರಾಜ್ಯ ಭೋಗಾದಿಗಳನ್ನು ಬಿಟ್ಟು, ಎಲ್ಲವೂ ಆ ಶ್ರೀ ಹರಿಯೇ ಎಂದೆಣಿಸಿ ವ್ರತ ಮಾಡಿದನು. ಕಡೆಯ ದ್ವಾದಶಿ ಕಾರ್ತಿಕ ಮಾಸದಲ್ಲಿ ಬಂದಿತ್ತು. ಮೂರು ದಿವಸಕ್ಕೆ ಮುಂಚೆಯೇ ಉಪವಾಸ ಮಾಡಿ, ದ್ವಾದಶಿಯ ದಿನ ಬೆಳಿಗ್ಗೆಯೇ ಎದ್ದು ಸಹಸ್ರ ಕುಂಭಾಭಿಷೇಕ ಇತ್ಯಾದಿಗಳನ್ನು ಮುಗಿಸಿ, ದಾನಾದಿಗಳನ್ನು ಮಾಡಿ, ಎಲ್ಲರಿಗೂ ಮೃಷ್ಟಾನ್ನ ಭೋಜನ ಉಣಿಸಿದನು. ಇನ್ನೇನು ತಾನು ತಿನ್ನಬೇಕು ಎನ್ನುವುದರಲ್ಲಿ ದೂರ್ವಾಸ ಮಹರ್ಷಿಗಳು ಅಲ್ಲಿಗೆ ಬಂದರು.
ಪರಮ ಆದರದಿಂದ ಅವರನ್ನು ಬರ ಮಾಡಿಕೊಂಡ ಅಂಬರೀಷನು ’ಇದು ಸಾಧನಿ ದ್ವಾದಶಿಯಾಗಿದ್ದು ತಾವು ಬಂದದ್ದು ತುಂಬಾ ಸಂತೋಷವಾಯಿತು; ಇಂದು ತಮ್ಮೊಂದಿಗೆ ನನ್ನ ಭೋಜನವಾಗಲಿ’ ಎಂದಿತ್ಯಾದಿಯಾಗಿ ಹೇಳಿ, ಅವರಿಗೆ ಯಮುನಾ ನದಿಯಲ್ಲಿ ಮಿಂದು ಬರಲು ತಿಳಿಸಿದನು ಮತ್ತು ದೂರ್ವಸರಿಗಾಗಿ ಕಾಯುತ್ತ ಇದ್ದನು.
ಇತ್ತ ಸ್ನಾನಕ್ಕಾಗಿ ಯಮುನೆಗೆ ಹೋದ ದೂರ್ವಾಸರು ಸ್ನಾನ-ಸಂಧ್ಯೆಯನ್ನು ಮುಗಿಸಿ ಬರುವುದರಲ್ಲಿ ಬಹಳ ಹೊತ್ತಾಯಿತು. ದ್ವಾದಶಿಗೆ ಕೇವಲ ಒಂದೆ ಗಳಿಗೆ ಮಿಕ್ಕಿತ್ತೆಂದು ಮನಗಂಡ ಅಂಬರೀಷನು ತನ್ನ ಒಂದು ವರುಷದ ವ್ರತವು ಈಗ ಪಾರಣೆ ಮಾಡದಿದ್ದರೆ ವ್ಯರ್ಥವಾಗುತ್ತದೆ ಎಂದು ತಿಳಿದು ಚಡಪಡಿಸಿದನು. ತನ್ನ ಪುರೋಹಿತರೊಂದಿಗೆ-ಗುರುಗಳೊಂದಿಗೆ ವಿಚಾರ ಮಾಡಿದನು. ಆಗ ’ಕೇವಲ ತೀರ್ಥ ಮತ್ತು ತುಳಸಿ ತೆಗೆದುಕೊಂಡು ದ್ವಾದಶಿ ಪಾರಣೆ ಮುಗಿಸು. ವ್ರತವು ಸಂಪೂರ್ಣವಾಗುತ್ತದೆ ಮತ್ತು ದೂರ್ವಾಸರನ್ನು ಬಿಟ್ಟು ಊಟ ಮಾಡಿದಂತೆಯು ಆಗುವುದಿಲ್ಲ’ ಎಂದು ಆತನ ಪುರೋಹಿತರು-ಗುರುಗಳು ಹೇಳಿದರು.ಅಂಬರೀಷ ಮಹಾರಾಜನು ಒಂದು ಪತ್ರ ತುಳಸಿ ಮತ್ತು ತೀರ್ಥ ತೆಗೆದುಕೊಂಡು ದೂರ್ವಾಸರಿಗಾಗಿ ಕಾಯುತ್ತ ಕೂತನು.
ಯಮುನಾ ತೀರದಿಂದ ಬಂದ ದೂರ್ವಾಸರು ನಡೆದಿದ್ದನ್ನು ತಿಳಿದು ಕೋಪಾವಿಷ್ಟರಾಗಿ ’ನನ್ನನ್ನು ಬಿಟ್ಟು ದ್ವಾದಶಿ ಪಾರಣೆ ಮುಗಿಸಿದೆಯಾ?’ ಎಂದು ಹೇಳಿ ಒಂದು ಶಕ್ತಿ ದೇವತೆಯನ್ನು ಪ್ರಕಟಿಸಿ ರಾಜನನ್ನು ಕೊಲ್ಲಲು ಅಜ್ಞಾಪಿಸಿದರು. ಇಷ್ಟೆಲ್ಲ ನಡೆಯುತ್ತಿದ್ದರು ರಾಜನು ಶ್ರದ್ಧೆಯಿಂದ ಶ್ರೀ ಹರಿಯಲ್ಲೆ ನೆಟ್ಟ ಮನಸ್ಕನಾಗಿ ಧ್ಯಾನದಲ್ಲಿ ಇದ್ದನು.
ಹಿಂದೆ ಪರಮ ಭಕ್ತನಾದ ಅಂಬರೀಷನನ್ನು ಕಾಪಾಡಲು ಸ್ವಯಂ ಪರಮಾತ್ಮನು ತನ್ನ ಸುದರ್ಶನವನ್ನು ರಾಜನಿಗೆ ಕೊಟ್ಟಿದ್ದನು. ಆ ಸುದರ್ಶನವು ಆ ಶಕ್ತಿ ದೇವತೆಯನ್ನು ಕೊಂದು ದೂರ್ವಸರ ಕಡೆಗೆ ಹೋಯಿತು. ಇದರಿಂದ ಕಂಗೆಟ್ಟ ದೂರ್ವಾಸರು ಸುದರ್ಶನದ ಜ್ವಾಲೆಯಿಂದ ತಪ್ಪಿಸಿಕೊಂಡು ಓಡ ತೊಡಗಿದರು.
ಶಿವನಲ್ಲಿ-ಬ್ರಹ್ಮನಲ್ಲಿ-ಕಡೆಗೆ ವಿಷ್ಣುವಿನಲ್ಲಿ ಹೋಗಿ ಬೇಡಿಕೊಳ್ಳಲು, "ಈ ಸುದರ್ಶನವು ತನ್ನ ಭಕ್ತನ ಅಧೀನವಾಗಿದೆ; ನೀನು ಹೋಗಿ ಆ ಅಂಬರೀಷನಲ್ಲೆ ಕ್ಷಮೆಯಾಚಿಸು" ಎಂದು ಆಜ್ಞಾಪಿಸಿದನು. ಮತ್ತೆ ಅಂಬರೀಷನಲ್ಲಿ ಮರಳಿದ ದೂರ್ವಸನು ರಾಜನ ಕಾಲಿಗೆ ಬಿದ್ದು ರಕ್ಷಿಸು ಎನ್ನಲು, ಅಂಬರೀಷನೆ ಸುದರ್ಶನನಲ್ಲಿ ಬೇಡಿಕೊಂಡು ಶಾಂತವಾಗಿಸಿದನು.
ಇಷ್ಟೆಲ್ಲ ಕಳೆಯಲು ೧ ವರುಷವಾಗಿತ್ತು. ಈ ಎಲ್ಲ ಹೊತ್ತೂ ರಾಜನು ಕೇವಲ ಏಕ ನಿಷ್ಠೆಯಿಂದ (ಮತ್ಪರಃ) ಪರಮಾತ್ಮನಲ್ಲಿ ಮನಸ್ಸಿಟ್ಟು ಕೇವಲ ನೀರನ್ನು ಕುಡಿದು ದಿನ ಕಳೆದಿದ್ದನು. ನಂತರ ದೂರ್ವಾಸರೊಂದಿಗೆ ಊಟ ಮಾಡಿ ಅವರನ್ನು ಬೀಳ್ಕೊಟ್ಟನು.
ಇಲ್ಲಿ ನಾವು ಅಂಬರೀಷನಲ್ಲಿ ಗಮನಿಸಬಹುದಾದ ಗುಣಗಳನ್ನೆ ಪರಮಾತ್ಮನು ಗೀತೆಯ ಶ್ಲೋಕದಲ್ಲಿ ತಿಳಿಸಿದ್ದಾನೆ.ಶ್ರದ್ಧೆ-ಏಕ ನಿಷ್ಠೆ-ಜಿತೆಂದ್ರಿಯತ್ವ ಇವುಗಳಿದ್ದರೆ ಜ್ಞಾನವು ಮತ್ತು ಜ್ಞಾನದಿಂದ ಮೋಕ್ಷವು ಸಿಗುವುದು ಎಂದು ಈ ಶ್ಲೋಕದ ಅಭಿಪ್ರಾಯ.
**********************