uddhared atmanatmanam
natmanam avasadayet
atmaiva hy atmano bandhur
atmaiva ripur atmanah || 6.5
A man must elevate himself by his own mind, not degrade himself. The mind is the friend of the conditioned soul, and his enemy as well
ಉದ್ಧರೇದಾತ್ಮನಾತ್ಮಾನಂ ನಾತ್ಮಾನಂ ಅವಸಾದಯೇತ್ |
ಆತ್ಮೈವ ಹಿ ಆತ್ಮನಾ ಬಂಧುಃ ಆತ್ಮೈವ ರಿಪುರಾತ್ಮನ್ಃ || 6.5
ಆತ್ಮೈವ ಹಿ ಆತ್ಮನಾ ಬಂಧುಃ ಆತ್ಮೈವ ರಿಪುರಾತ್ಮನ್ಃ || 6.5
ಇಲ್ಲಿ ’ಆತ್ಮ’ ಶಬ್ದಕ್ಕೆ ಎರಡು ಅರ್ಥ ಹೇಳಲಾಗಿದೆ
ಒಂದು, ’ಆತ್ಮನಾ’ ಎಂದರೆ ಮನಸ್ಸಿನಿಂದ - ಮನಸ್ಸಿನ ಮೂಲಕ, ಆತ್ಮದ -ಜೀವದ ಉದ್ಧಾರ ಮಾಡಿಕೊಳ್ಳಬೇಕು.
ನಾತ್ಮಾನಂ ಅವಸಾದಯೇತ್ - ದುಃಖ ಭಾಗಿ ಮಾಡಿಕೊಳ್ಳಬಾರದು.
ಮನವೇ ಬಂಧು, ಮನವೆ ರಿಪು - ಶತ್ರು
ಮನಸ್ಸಿಗೆ ವಿಶೇಷ ಸ್ಥಾನ ನೀಡಲಾಗಿದೆ. ಇಂದ್ರಿಯಗಳಲ್ಲಿ ಪ್ರಮುಖವಾದುದು ಮನಸ್ಸು.
’ಮನಷಷ್ಠಾನೀಂದ್ರಿಯಾಣಿ’ (೧೨)
’ಇಂದ್ರಿಯಾಣಾಂ ಮನಶ್ಚಾಸ್ಮಿ ’ (೧೦)
ಇಂಥ ಮನಸ್ಸಿನ ಮೂಲಕ ನಮ್ಮ ಉದ್ಧಾರ ಆಗಬೇಕು. ಸುಖ ಭಾಜನವಾಗಿಸಿಕೊಳ್ಳಬೇಕು; ದುಃಖ ಕೊಡಬಾರದು.
ಮನಸ್ಸೆ ಬಂಧು ಮತ್ತು ಮನಸ್ಸೆ ಶತ್ರು ಹೇಗೆ?
ಯಾರು ಮನಸ್ಸನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾನೊ ಅವನಿಗೆ ಮನಸ್ಸೆ ಬಂಧು ಇಲ್ಲದಿದ್ದರೆ ಅದೇ ಮನಸ್ಸು ಶತ್ರುವಿನಂತೆ ಕೆಲಸ ಮಾಡುತ್ತದೆ.
ಇಂಥ ಮನಸ್ಸನ್ನು ಹೇಗೆ ವಶ ಪಡಿಸಿಕೊಳ್ಳುವುದು?
’ಇಂದ್ರಿಯಾಣಿ ಹಯನಾಹುಃ’
ಇಂದ್ರಿಯಗಳು ಎಂದರೆ ಕುದುರೆಗಳಂತೆ. ಅವುಗಳನ್ನು ಹೇಗೆ ನಿಗ್ರಹಿಸುವುದು? -- ಬುದ್ಧಿಯ ಮೂಲಕ
’ಬುದ್ಧ್ಯಾ ಧೃತಗ್ರಹೀತಯ’ ಎಂದು ಸ್ವತಃ ಕೃಷ್ಣನೆ ಮುಂದೆ ತಿಳಿಸುತ್ತಾನೆ.
ನಮ್ಮ ಕುದುರೆಯಂತಹ ಮನಸ್ಸನ್ನು ಪರಮಾತ್ಮನ ಕಡೆಗೆ ತಿರುಗಿಸಬೇಕು. ಬುದ್ಧಿಯು ಮನಸ್ಸಿಗೆ ಸಾರಥಿಯಾಗಬೇಕು. ಸರಿಯಾದ ಮಾರ್ಗದಲ್ಲಿ ನಡೆಸಬೇಕು. ಜ್ಞಾನ ಸಿಗಬೇಕು. ಜ್ಞಾನ ಹೇಗೆ ಸಿಗುತ್ತದೆ? ಸತ್ಸಂಗ ಮಾಡಬೇಕು. ಗುರುವಚನ ಆಲಿಸಬೇಕು. ಆಗ ಮನಸ್ಸು ವಶಕ್ಕೆ ಬರುತ್ತದೆ.
ಮಹಾಭಾರತದಲ್ಲಿ ಒಂದು ಕಥೆ ಬರುತ್ತದೆ.
ಒಬ್ಬ ಅಲರ್ಕ ಎಂಬ ರಾಜನಿರುತ್ತದೆ. ಆತ ಒಮ್ಮೆ ’ಇಂದ್ರಿಯಗಳಲ್ಲವೆ ನಮಗೆ ಶತ್ರು? ನಾನು ಆ ಶತ್ರುಗಳನ್ನು ಕೊಂದು ಬಿಡುತ್ತೇನೆ.
ಕಣ್ಗಳಿದ್ದರೆ ಅಲ್ಲವೆ ನಾನು ಕೆಟ್ಟದ್ದನ್ನು ನೋಡುವುದು? ಆ ಕಂಗಳನ್ನು/ಕಿವಿಯನ್ನು ನಾನು ಕತ್ತರಿಸಿ ಬಿಡುತ್ತೇನೆ’ ಎಂದು ಆಯುಧ ಹಿಡಿದು ತನ್ನ ಕಣ್-ಕಿವಿಗಳನ್ನು ಕತ್ತರಿಸಲು ಹೋಗುತ್ತಾನೆ. ಆಗ ದೇವತೆಗಳು ಬಂದು ಅವನನ್ನು ತಡೆಯುತ್ತಾರೆ.
’ಏನಿದು? ಕೆಟ್ಟದ್ದು ನೋಡಬಾರದು ನಿಜ. ಹಾಗೆಂದು ಕಣ್ಣುಗಳನ್ನು ಕಿತ್ತು ಕೊಂಡರೆ, ಒಳ್ಳೆಯದೂ ನಿನ್ನಿಂದ ನೋಡಲಾಗುವುದಿಲ್ಲ!’
ಟಿ.ವಿ. ನೋಡಬಾರದು ಎಂದು ಕಣ್ಣು ಕಿತ್ತುಕೊಂಡರೆ, ತಿರುಪತಿ ಶ್ರೀನಿವಾಸನ ದರ್ಶನದಿಂದಲೂ ವಂಚಿತರಾಗಬೇಕಾದೀತು. ಕೆಟ್ಟದ್ದನ್ನು ಕೇಳಬಾರದು ಎಂದು ಕಿವಿಯನ್ನು ಕಿತ್ತುಕೊಂಡರೆ, ಸಚ್ಛಾಸ್ತ್ರ ಶ್ರವಣದ ಭಾಗ್ಯದಿಂದ ವಂಚಿತನಾಗಬೇಕಾದೀತು.
ಇಂದ್ರಿಯಗಳನ್ನು ಕಳೆದುಕೊಳ್ಳುವುದಲ್ಲ; ಅವುಗಳು ಕೆಟ್ಟದ್ದರ ಕಡೆಗೆ ಹೋಗದಂತೆ ನೋಡಿಕೊಳ್ಳುವುದು ಮುಖ್ಯ; ಜ್ಞಾನ ಬರುವುದು ಮುಖ್ಯ.
ಮತ್ತೊಂದು ಅರ್ಥ: ಆತ್ಮನಾ ಎಂದರೆ - ಪರಮಾತ್ಮನಾ - ಪರಮಾತ್ಮನ ಮೂಲಕ (ಬಹುಶಃ ಕೇವಲ ಮಧ್ವಾಚಾರ್ಯರು ಮಾತ್ರ ಈ ಅರ್ಥದಿಂದ ಇದನ್ನು ವಿಶ್ಲೇಷಿಸಿರುವುದು.)
ಕೇವಲ ನಮ್ಮ ಮನಸ್ಸಿನಿಂದ ನಮ್ಮ ಉದ್ಧಾರ ಸಾಧ್ಯವೆ? ಅದಕ್ಕೆ ದೇವರ ಅನುಗ್ರಹ ಬೇಕು.
ಕೇವಲ ಬಲ್ಬ್ ಇದ್ದು ಅದಕ್ಕೆ ವಿದ್ಯುತ್ ಇಲ್ಲದಿದ್ದರೆ ಹೇಗೋ ಹಾಗೆ.
ಹೀಗೆ ದೇವರ ದಯೆಯಾಗಬೇಕು ಮತ್ತು ಆತನಿಂದಲೆ ಉದ್ಧಾರವಾಗಬೇಕು.
(ಯಮೈವೇಷಾ ವೃಣುತೇ ತೇನ ಹಿ ಲಭ್ಯಃ -- ಅವನು ಯಾರನ್ನು ತನ್ನವನನ್ನಾಗಿಸಲು ಬಯಸುವನೋ, ಅವರನ್ನೆ ವರಿಸುವನು!)
ಸರಿ, ಈಗ ಮುಂದಿನ ಶ್ಲೋಕಕ್ಕೆ ಹೇಗೆ ಅನ್ವಯ?
ದೇವರೆ ಜೀವನ ಬಂಧು ಮತ್ತು ಆತನೇ ಜೀವನ ಶತ್ರು.
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧು ಚ ಸಖಾ ತ್ವಮೇವ ||
ಇಲ್ಲೂ ಹಾಗೆಯೇ - ದೇವರೇ ಬಂಧು. ಆತನೆ ನಮ್ಮ ಉದ್ಧಾರಕ್ಕೆ ಕಾರಣ. ೧೨ನೆ ಅಧ್ಯಾಯದಲ್ಲಿ ಕೃಷ್ಣನೇ ಹೇಳುತ್ತಾನೆ:
ತೇಷಾಮಹಂ ಸಮುದ್ಧರ್ತಾ ಮೃತ್ಯು ಸಂಸಾರ ಸಾಗರಾತ್ | ೧೨.೭
’ನಾನೆ ಜೀವರ ಉದ್ಧಾರ ಮಾಡುವೆನು’ ಎಂದು.
ಯಾರನ್ನು ಉದ್ಧಾರ ಮಾಡುತ್ತಾನೆ? ಯಾರಿಗೆ ಆತ ಬಂಧು?
ಯಾರು ಅವನನ್ನು ವಶ ಮಾಡಿಕೊಳ್ಳುತ್ತಾರೊ ಅವನಿಗೆ ಭಗವಂತ ಬಂಧುವಾಗುತ್ತಾನೆ! ಆದರೆ ಅವನನ್ನು ವಶ ಮಾಡಿಕೊಳ್ಳುವುದು ಹೇಗೆ?
"ವಶಿ ವಶೇ ನ ಕಸ್ಯಾಪಿ" ಎಂದು ದ್ವಾದಶ ಸ್ತೋತ್ರದಲ್ಲಿ ಬಂದಿದೆ.
ಅವನನ್ನು ಭಕ್ತಿಯಿಂದ ವಶಮಾಡಿಕೊಳ್ಳಬೇಕು. ಯಾರು ಪರಮಾತ್ಮನನ್ನು ಭಕ್ತಿಯಿಂದ ವಶಮಾಡಿಕೊಳ್ಳುತ್ತಾನೆ ಅವನಿಗೆ ಪರಮಾತ್ಮ ಬಂಧುವಾಗುತ್ತಾನೆ. ಅನುಗ್ರಹ ಮಾಡುತ್ತಾನೆ. ಇಲ್ಲದಿದ್ದರೆ ಅನುಗ್ರಹ ಮಾಡದೆ ಶತ್ರು ಸದೃಶನಾಗುತ್ತಾನೆ.
ಭೀಷ್ಮ ಮತ್ತು ಪರಶುರಾಮನ ಯುದ್ಧದ ಕಥೆ ಮಹಾಭಾರತದಲ್ಲಿ ಬರುತ್ತದೆ. ಅಂಬೆ (ಶಿಖಂಡಿಯೇ ಹಿಂದಿನ ಜನ್ಮದಲ್ಲಿ ಅಂಬೆ) ಪರಶುರಾಮರ ಹತ್ತಿರ ಹೋಗಿ, ತನಗೆ ಅನ್ಯಾಯವಾಗಿದೆ ಎಂದು ದೂರು ನೀಡುತ್ತಾಳೆ. ಏಕೆಂದರೆ ಆಕೆಗೆ ತಿಳಿದಿದೆ, ಭೀಷ್ಮನನ್ನು ಸೋಲಿಸಲು ಪರಶುರಾಮನಿಂದ ಮಾತ್ರ ಸಾಧ್ಯ ಎಂದು.
ಪರಶುರಾಮನಾದರೋ ಸ್ವತಃ ಪರಮಾತ್ಮ! ಭೀಷ್ಮ ಆತನ ಪರಮ ಭಕ್ತ!!
ಪರಶುರಾಮನು ಬಂದು ಭೀಷ್ಮನಲ್ಲಿ ಕೇಳುತ್ತಾನೆ, ’ನನ್ನೊಡನೆ ಯುದ್ಧಮಾಡುವಿಯೋ ಇಲ್ಲ ಅಂಬೆಯನ್ನು ವಿವಾಹವಾಗುವಿಯೋ?’
ಭೀಷ್ಮ ಹೇಳುತ್ತಾನೆ, ’ಬ್ರಹ್ಮಚಾರಿಯಾಗಿ ಇರುತ್ತೇನೆ ಎಂದು ಶಪಥ ಮಾಡಿದ್ದೇನೆ, ಯುದ್ಧ ಮಾಡುವೆ’ ಎಂದು.
ಈಗ ಭೀಷ್ಮ ಧನುರ್-ಬಾಣಗಳನ್ನು ಕೆಳಗಿಟ್ಟು, ಸೀದಾ ಪರಶುರಾಮನಲ್ಲಿ ಹೋಗಿ, ೩ ಸುತ್ತು ತಿರುಗಿ, ’ಪರಮಾತ್ಮ ನೀನೆ ರಕ್ಷಣೆ ಮಾಡು’ ಎನ್ನುತ್ತಾನೆ. ’ತಥಾಸ್ತು’ ಎಂದು ಪರಶುರಾಮನು ಅಭಯ ನೀಡುತ್ತಾನೆ.
ಇನ್ನೆಲ್ಲಿ ಸೋಲು ಭೀಷ್ಮನಿಗೆ?! ಸುಮಾರು ದಿನಗಳ ಕಾಲ ನಡೆದ ಯುದ್ಧದ ನಂತರ, ದೇವತೆಗಳು ಬಂದು ಪರಶುರಾಮನಲ್ಲಿ ಬೇಡಿಕೊಳ್ಳುತ್ತಾರೆ, ಯುದ್ಧ ನಿಲ್ಲಿಸಲು.
ಇಲ್ಲಿ ಭೀಷ್ಮನು ತನ್ನ ಭಕ್ತಿಯಿಂದ ಪರಮಾತ್ಮನನ್ನು ವಶ ಮಾಡಿಕೊಂಡವ.
ಅದೇ ದುರ್ಯೋಧನ, ಕೃಷ್ಣನನ್ನು ಶಕ್ತಿಯಿಂದ ಕಟ್ಟಿ ಹಾಕಲು ಪ್ರಯತ್ನಿಸುತ್ತಾನೆ. ತನ್ನ ವಿಶ್ವರೂಪ ತೋರಿಸುತ್ತಾನೆ ಕೃಷ್ಣ. ಮಾತ್ರವೇ ಅಲ್ಲ, ಮುಂದೆ ಕೆಲವೇ ದಿನಗಳಲ್ಲಿ ಆತನ ಕುಲದ ನಾಶವೇ ಆಗಿ ಹೋಗುತ್ತದೆ.
ಇಲ್ಲಿ ಪರಮಾತ್ಮನೆ ಶತ್ರುವಾಗುತ್ತಾನೆ. ಅಲ್ಲಿ ಬಂಧುವಾಗಿ ರಕ್ಷಿಸುತ್ತಾನೆ!
No comments:
Post a Comment