Wednesday, February 13, 2008

ಒಂದು ದಿನ ಹೀಗೆ ..

****************
ಸುಮ್ಮನೆ ಯೋಚಿಸಿ ನೋಡಿ, ನಿಮಗೆ ಹೀಗೆ ಒಂದು ದಿನ ಆಗಿದ್ದರೆ ಏನು ಮಾಡುತ್ತಿದ್ದಿರಿ ?
****************
ನಿದ್ದೆಯಿಂದ ಎಚ್ಚೆತ್ತು ಕಣ್ಣು ಬಿಟ್ಟು ನೋಡಿದ; ಏನು ಕಾಣುತ್ತಿಲ್ಲ
’ಕಣ್ಣು ಇನ್ನೂ ಮುಚ್ಚಿಯೇ ಇದ್ದೀನೋ ಹೇಗೆ’ ಎಂದು ಮತ್ತೆ ತನ್ನನ್ನೆ ಪ್ರಶ್ನಿಸುತ್ತಾ ಸುತ್ತಲೂ ನೋಡಲು ಪ್ರಯತ್ನಿಸಿದ.
’ಇಲ್ಲ, ಏನು ಕಾಣುತ್ತಿಲ್ಲ!’
ಕಣ್ಣು ಉಜ್ಜಿಕೊಂಡ ; ಮತ್ತೆ ನೋಡಿದ. ಏನೊ ಅಸ್ಪಷ್ಟ, ಇನ್ನೂ ಗೊತ್ತಾಗುತ್ತಿಲ್ಲ.
’ನಾನು ಇನ್ನೂ ಕನಸು ಕಾಣುತ್ತಿದ್ದೇನೆಯೆ?’ ಎಂಬಂತೆ ಯೋಚಿಸಿ, ಹೊರಳಿದ.
’ಎಲ್ಲಿದ್ದೇನೆ ? ಏಕೆ ಏನು ಕಾಣಿಸುತ್ತಿಲ್ಲ ?!’
ಕೆಳಗೆ ಮುಟ್ಟಿ ನೋಡಿದ, ’ಮೆತ್ತಗಿದೆ- ಹಾಸಿಗೆಯೆ ?’ ತಿಳಿಯುತ್ತಿಲ್ಲ.
ಎದ್ದು ಕೂತ. ಕಗ್ಗತ್ತಲಿಗೆ ನಿಧಾನವಾಗಿ ಹೊಂದಿಕೊಂಡ ಕಂಗಳು ಒಂದು ಅಸ್ಪಷ್ಟ ಚಿತ್ರಣ ನೀಡುತ್ತಿವೆ.
ಮುಂದೆ-ಹಿಂದೆ ಅಕ್ಕ-ಪಕ್ಕ ತಿರುಗಿ ನೋಡಿದ. ಎಲ್ಲವೂ ಹಾಗೆ. ಒಂದೂ ತಿಳಿಯುತ್ತಿಲ್ಲ!!
ಏನಾದ್ರು ಕೇಳುತ್ತಿದೆಯೆ?
’ಇಲ್ಲ ! ಏನು ಕೇಳಿಸುತ್ತಿಲ್ಲ. ಹೌದಲ್ಲ, ಕೇವಲ ನಿಶಬ್ದ’
’ಏಕೆ ಏನು ಕೇಳಿಸುತ್ತಿಲ್ಲ ?’
ಏಕಾಗ್ರದಿಂದ ಆಲಿಸಿದ.
’ಊಹೂಂ ಏನು ಕೇಳಿಸದೆ, ಕಿವಿಯೇ ಗುಂಯ್‍ಗುಟ್ಟುತ್ತಿದೆಯೆ ?!’
’ಅಥವಾ ನನಗೆ ಕಿವಿಯೇ ಕೇಳಿಸುತ್ತಿಲ್ಲವೆ ?’
’ಯಾರನ್ನಾದರು ಕೂಗಿ ಕರೆಯೋಣವೆ ?’
’ಯಾರನ್ನು ಕರೆಯಲಿ ? ನೆನಪಿಗೆ ಬರುತ್ತಿಲ್ಲ
ಅಷ್ಟಕ್ಕೂ ನಾನು ಎಲ್ಲಿದ್ದೇನೆ ?
ಅಂದ ಹಾಗೆ ನಾನು ಯಾರು ? ನನ್ನ ಹೆಸರೇನು ?
ಇದೇನಾಯಿತು ನನಗೆ ? ಏನು ಗೊತ್ತಾಗುತ್ತಿಲ್ಲವಲ್ಲ ?!!
ಎಲ್ಲವೂ ಮರೆತು ಹೋಗಿದೆಯೆ ?’
ಕೂತ ಕಡೆಯಿಂದ ಇಳಿದು ನೋಡೋಣ.
’ಎಲ್ಲಿ ಕೂತಿದ್ದೇನೆ ? ಅದೂ ತಿಳಿಯುತ್ತಿಲ್ಲವಲ್ಲ’
ಕಾರ್ಗತ್ತಲಿನಲ್ಲಿ ಕೆಳಗೆ ಇಳಿಯಲು ನೋಡಿದ.
ಕೆಳಗೆ ಇಳಿದ ರಭಸಕ್ಕೆ ಕಾಲು ಜಾರಿತು; ’ಅರೆರೆ ನೀರು !’
ನೀರಿನಲ್ಲಿ ಬಿದ್ದ. ’ಭಯವಾಗುತ್ತಿದೆಯೆ? ಗೊತ್ತಿಲ್ಲ’
’ಮೊದಲು ನೀರಿನಿಂದ ಮೇಲೇರೋಣ.’
’ಅದೋ ಆ ಜಾಗದಲ್ಲಿಂದಲ್ಲವೆ ನಾನು ಬಿದ್ದಿದ್ದು ?’
ಅಲ್ಲಿಗೇ ಹೋಗಲು ಪ್ರಯತ್ನಿಸಿದ.
’ಏನಾದರು ಹಿಡಿಯಲು ಸಿಗುವುದೊ ? ಕತ್ತಲಿನಿಂದಾಗಿ ಇದು ಏನು ಎಂದೂ ತಿಳಿಯುತ್ತಿಲ್ಲ.’
’ಎಲೆಯೆ ? ಎಲೆಯ ಹಾಗೆ ಇರುವ ಮತ್ತೆನಾದರು ವಸ್ತುವೋ ? ಗಿಡವೆ ? ಹೂವೆ ?’
’ಯಾವುದರ ಮೇಲಿದ್ದೆ ನಾನು? ಎಲ್ಲಿಂದ ಬಿದ್ದೆ ?’
’ಹಾ..ಕಡೆಗೂ ಸಿಕ್ಕಿತು ನನ್ನ ಜಾಗ.’
"ನನ್ನ" ಜಾಗ ?
’ಇದು ಯಾವ ಜಾಗ ? ಯಾರ ಜಾಗ ?
’ಮತ್ತೆ ಮೊದಲಿದ್ದ ಜಾಗಕ್ಕೆ ಕತ್ತಲ್ಲಲ್ಲೇ ತಡಕಾಡುತ್ತಾ ಬಂದು ನಿಂತ;
ಮೈಯ್ಯೆಲ್ಲ ಒದ್ದೆ. ನೀರು ತೊಟ್ಟಿಡಲು ಶುರುವಾಯಿತು.
ಟಪ್- ಟಪ್
’ಉಶ್ ! ಸದ್ಯ ಮೇಲೆ ಬಂದೆನಲ್ಲ.
ಯಾರೋ ನನಗೆ ಗೊತ್ತಿಲ್ಲದೆ ನನ್ನನು ತಂದು ಇಲ್ಲಿ ಬಿಟ್ಟಿದ್ದಾರೆ
ನನಗೆ ಗೊತ್ತಿಲ್ಲದೇಯೊ ಅಥವಾ ಅವರಿಗೆ ಗೊತ್ತಿರಲಿಲ್ಲವೆ ?’
ಟಪ್-ಟಪ್
ನೀರು ಇನ್ನೂ ತೊಟ್ಟಿಡುತ್ತಾ ಇದೆ
’ಯಾರು ನನ್ನ ಇಲ್ಲಿ ತಂದು ಬಿಟ್ಟಿದ್ದು ? ಯಾಕೆ ?
ಬರೀ ವಿಚಿತ್ರವಾಗಿದೆಯಲ್ಲ !
ಯಾವುದೂ ಸರಿಯಾಗಿ ಕಾಣುತ್ತಿಲ್ಲ, ಯಾರನ್ನು ಸಹಾಯಕ್ಕೆ ಕೂಗಲಾಗುತ್ತಿಲ್ಲ
ಯಾವ ಶಬ್ದವೂ ಕಿವಿಗೆ ಕೇಳಿಸುತ್ತ್...’
ಟಪ್-ತಪ್
’ಹಾ...ಈಗ ಶಬ್ದ ಕೇಳಿಸಿತು ಬರೀ ಟಪ್-ಟಪ್’
’ಹಾಂ ಏನು ಯೋಚಿಸುತ್ತಿದೆ ?
ಹೌದು ಎಲ್ಲಿದ್ದೇನೆ ? ಯಾಕೆ ಇಲ್ಲಿದ್ದೇನೆ ?
ಯಾರು ಕರೆ ತಂದರು ? ಯಾರಲ್ಲಿ ಕೇಳಲಿ ?’
ಟಪ್-ತಪ್
’ಅಯ್ಯೊ.. ಈ ಶಬ್ದ ಬೇರೆ;
ಈಗ ಏನು ಮಾಡಲಿ ?
ಏನು ಮಾಡಲಿ ? ಯಾರು ಉತ್ತರ ನೀಡುತ್ತಿಲ್ಲ'
ಟಪ್-ತಪ್
’ಯಾರಾದ್ರು ಹೇಳಿ ..’
ಟಪ್-ತಪ್
ಇನ್ನೂ ನೀರು ತೊಟ್ಟಿಡುವುದು ನಿಂತಿಲ್ಲ
ತನ್ನೊಳಗೆ ಎಂಬಂತೆ ನಗುತ್ತಾ - ’ನನ್ನ ಸಂಗಾತಿ ಎಂದರೆ ಈ ಶಬ್ದ ಒಂದೆ’
ಟಪ್-ತಪ್
’ನನ್ನ ಎಲ್ಲ ಪ್ರಶ್ನೇಗೂ ಉತ್ತರ ಬರುತ್ತಿರುವುದು ಇದೊಂದೆ ಶಬ್ದದಿಂದ’
ಟಪ್-ತಪ್
’ಈ ಶಬ್ದವೇ ನನಗೆ ಏನನ್ನಾದರು ಹೇಳಲು ಪ್ರಯತ್ನಿಸುತ್ತಿದ್ದೆಯೆ ?!’
ಟಪ್-ತಪ್
’ಏನು ಹೀಗೆಂದರೆ ?’
ಟಪ್-ತಪ್
ಟಪ್-ತಪ್
ಟಪ್-ತಪ್
****************
ನಿಮಗೆ ಹೀಗೆ ಒಂದು ದಿನ ಆಗಿದ್ದರೆ ಏನು ಮಾಡುತ್ತಿದ್ದಿರಿ ?
ಈ ವ್ಯಕ್ತಿ ಏನು ಮಾಡಿದ ಗೊತ್ತೆ ?
ಈತ ಯಾರು ಎಂದು ಹೇಳಿದರೆ ಸಾಕು ಬಿಡಿ ನಿಮಗೆ ಗೊತ್ತಾಗುತ್ತದೆ ಮುಂದಿನ ವಿಷಯ
ಇಷ್ಟಕ್ಕೂ ಈ ಕಥೆ ಯಾರದು ತಿಳಿಯಿತೆ ?
ಸಕಲ ಸೃಷ್ಟಿಯ ಒಡೆಯ - ಬ್ರಹ್ಮನದು
ನೀರು ತೊಟ್ಟಿಡುವ ಶಬ್ದದಿಂದ ಅವನಿಗೆ ತಿಳಿದದ್ದು ’ತಪಸ್ಸು ಮಾಡಬೇಕು’ ಎಂದು
ಮುಂದಿನದ್ದೆಲ್ಲ... ಈಗ ಇತಿಹಾಸ!
*****************