Sunday, March 07, 2010

Gita satsang 13.11 (aratir janasamsadi)

mayi cananya-yogena
bhaktir avyabhicarini
vivikta-desa-sevitvam
aratir jana-samsadi || 13.11

"..constant and unalloyed devotion to Me, resorting to solitary places, detachment from the general mass of people .."

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣಿ |
ವಿವಿಕ್ತದೇಶಸೇವಿತ್ವಂ ಅರತಿರ್ಜನಸಂಸದಿ || ೧೩.೧೧

ಈ ಅಧ್ಯಾಯದಲ್ಲಿ ಇದುವರೆಗು ಹೇಳಿದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸುತ್ತಾನೆ. ಅರ್ಜುನ ಕೇಳುತ್ತಾನೆ ’ಕ್ಷೇತ್ರ ಯಾವುದು, ಕ್ಷೇತ್ರಜ್ಞ ಯಾರು, ಜ್ಞಾನ ಯಾವುದು?’ ಎಂದು.
ಉತ್ತರವಾಗಿ ಕೃಷ್ಣ ಈ ಇಡಿ ಬ್ರಹ್ಮಾಂಡವೇ ಕ್ಷೇತ್ರ ಮತ್ತು ಸ್ವಯಂ ಕೃಷ್ಣನೆ ಕ್ಷೇತ್ರಜ್ಞ ಎಂದು ಹೇಳುತ್ತಾನೆ. ಮುಂದೆ ಜ್ಞಾನ ಎಂದರೆ ಏನು ಎಂದು ತಿಳಿಸುತ್ತಾ, ಜ್ಞಾನ ಪಡೆದುಕೊಳ್ಳಲು ದಾರಿ ಯಾವುದು ಎಂದು ಹೇಳುತ್ತಾನೆ.
ಅಲ್ಲಲ್ಲಿ ೨ನೇ ಅಧ್ಯಾಯದಿಂದ ಈ ವಿಷಯಗಳನ್ನು ತಿಳಿಸಿದ್ದಾನೆ ಆದರೆ, ಇಲ್ಲಿ ಒಂದೆಡೆ ಎಲ್ಲವನ್ನೂ summarize ಮಾಡಿ ಹೇಳುತ್ತಾನೆ.
ಜ್ಞಾನಕ್ಕೆ ೨೦ ಸಾಧನಗಳು ಎಂದು ತಿಳಿಸುತ್ತಾನೆ.
"ಅಮಾನಿತ್ವಂ ಅದಂಬಿತ್ವಂ.."
ಅಹಂಕಾರ ತೋರಿಸಿಕೊಳ್ಳದೆ ಇರುವುದು, ಅತ್ಯಾಸಕ್ತಿ ಇರದೆ ಇರುವುದು ಮುಂತಾದ ೨೦ ಸಾಧನಗಳು.

’ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣಿ’
’ಅನನ್ಯಯೋಗ’ ಎಂಬುದನ್ನು ಹಿಂದಿನ ೯ನೆ ಅಧ್ಯಾಯದಲ್ಲಿ ’ಅನನ್ಯಾಶ್ಚಿಂತಯಂತೋ ಮಾಂ..’ ಮತ್ತು ೧೨ನೆ ಅಧ್ಯಾಯದಲ್ಲಿ ’ಅನನ್ಯಾನೈವ ಯೋಗೇನ ಮಾಂ ಧ್ಯಾಯಂತ ಉಪಾಸತೆ..’ ಹೇಳಿದ್ದಾನೆ.

ಅಲ್ಲಿ ನೋಡಿದಂತೆಯೆ, ಇಲ್ಲೂ ಸಹ, ಅನನ್ಯ ಯೋಗ ಎಂದರೆ, ಮನಸ್ಸಿನಲ್ಲಿ ಬೇರೆ ವಿಷಯಗಳನ್ನು ಚಿಂತಿಸದೇ, ಕೇವಲ ಪರಮಾತ್ಮನ ಬಗ್ಗೆಯೇ ಚಿಂತಿಸುವುದು ಮತ್ತು, ಅನ್ಯ ದೇವತೆಗಳನ್ನು ಸ್ವತಂತ್ರರೆಂದು ಪೂಜಿಸಿದೇ, ಪರಮಾತ್ಮನೊಬ್ಬನೇ ಸ್ವತಂತ್ರ, ಸರ್ವೋತ್ತಮ ಎಂದು ಅವನಲ್ಲಿಯೇ ಭಕ್ತಿಯನ್ನು ಇಡುವುದು. ಹೀಗೆ ಅವನನ್ನು ತಿಳಿದು ಇಟ್ಟುಕೊಂಡ ಭಕ್ತಿ ’ಅವ್ಯಭಿಚಾರಿಣಿ’ ಭಕ್ತಿ ಎಂದು ಆಗುತ್ತದೆ.
ಅಂದರೆ, ಪರಮಾತ್ಮನನ್ನು ಹೇಗೆ ತಿಳಿಯಬೇಕೊ ಹಾಗೆ ತಿಳಿದುಕೊಂಡು, ಅವನಲ್ಲಿ ಭಕ್ತಿಯನ್ನು ಇಡುವುದು, ’ಅವ್ಯಭಿಚಾರಿಣಿ’ ಭಕ್ತಿ ಎಂದು. ಅನ್ಯ ದೇವತೆಗಳನ್ನು ಕೃಷ್ಣನಿಗಿಂತ ಉತ್ತಮರು ಎಂದು ಮುಂತಾಗಿ ಯೋಚಿಸಿ ಭಕ್ತಿ ಮಾಡುವುದು ’ವ್ಯಭಿಚಾರಿಣಿ’ ಭಕ್ತಿಯಾಗುತ್ತದೆ.
ಹೀಗೆ, ಪರಮಾತ್ಮನಲ್ಲಿ ಅನನ್ಯಯೋಗದಿಂದ ಭಕ್ತಿಯನ್ನು ಇಟ್ಟು ಪೂಜಿಸಿವುದು, ಅವನ ಜ್ಞಾನ ಪಡೆಯುವ ಮಾರ್ಗ ಎಂದು ಹೇಳುತ್ತಾನೆ.

ಮುಂದುವರೆದು,
’ವಿವಿಕ್ತ ದೇಶಸೇವಿತ್ವಂ ಅರತಿರ್ಜನಸಂಸದಿ’ ಎನ್ನುತ್ತಾನೆ.
ನಿರ್ಮಲವಾದ ಪ್ರದೇಶದಲ್ಲಿ ಇರುವುದು ಮತ್ತು ಜನಸಮೂಹದ ನಡುವೆ ಇರಲು ಬಯಸದೆ ಇರುವುದು.

ಜನರ ನಡುವೆ ಇರುವುದು ಎಂದರೆ ಮಾತು-ಹರಟೆ ಕೇವಲ ದೇವರ ವಿಷಯದಿಂದ ದೂರ ಹೋದಂತೆ. ಮನಸ್ಸು ಚಂಚಲವಾಗುವುದು ಇವೆಲ್ಲ ಜನರ ನಡುವೆ ಇರುವುದರಿಂದ ಆಗುವ ದುಷ್ಪರಿಣಾಮಗಳು. ಆದ್ದರಿಂದ ಜನಸಂದಣಿ ಇಲ್ಲದ ನಿರ್ಮಲ ಪ್ರದೇಶದಲ್ಲಿ ಇರುವುದೂ ಜ್ಞಾನಕ್ಕೆ ದಾರಿ ಎಂದು ಹೇಳಿದೆ.
ಇನ್ನೊಂದು ಕಡೆಯಲ್ಲಿ ಜನರ ಸಹವಾಸ ಬಿಡುವುದು ಎಂದರೆ, ಕೆಟ್ಟ ಜನರ ಸಹವಾಸ ಬಿಡುವುದು ಎಂಬ ವಿಶೇಷ ಅರ್ಥವು ಇದೆ.

ನಮಗೆ crowd psychology ವಿಷಯ ತಿಳಿದೆ ಇದೆ. ಜನ ಸಮೂಹ ನಡೆದಂತೆ ನಾವು ನಡೆಯುತ್ತೇವೆ. ಕೆಟ್ಟ ಗುಂಪು ಇದ್ದರೆ, ನಾವು ಕೆಟ್ಟ ರೀತಿಯಲ್ಲೇ ನಡೆಯುತ್ತೇವೆ. ಒಳ್ಳೆಯ ಜನರ ಸಹವಾಸವಿದ್ದರೆ, ನಮಗೆ ಒಳ್ಳೆಯದೇ ಆಗುತ್ತದೆ.

ಭಾಗವತ ೧೧ನೇ ಸ್ಕಂದದಲ್ಲಿ ’ಉದ್ಧವ ಗೀತೆ’ ಬರುತ್ತದೆ. ಅದೂ ಕೃಷ್ಣನು ಉದ್ಧವನಿಗೆ ಉಪದೇಶಿಸಿದ ಗೀತೆ. ಆ ಉದ್ಧವ ಗೀತೆಯ ಒಳಗೆ ಮತ್ತೊಂದು ಕಥೆ ಹೇಳುತ್ತಾನೆ ಕೃಷ್ಣ ಅದು ಒಬ್ಬ ಅವಧೂತನದು.
ಅದು ಒಬ್ಬ ಅವಧೂತನ ಗೀತೆ.
ಅದರಲ್ಲಿ ಯಯಾತಿ ಮಹಾರಾಜ ಒಬ್ಬ ಅವಧೂತನನ್ನು ಭೀಟಿಯಾದಾಗ ಕೇಳುತ್ತಾನೆ, ’ನೀನು ಹೇಗೆ ಸದಾ ಸಂತೋಷವಾಗಿ ಇರುತೀಯ? ನಾನು ಮಹಾರಾಜನಾಗಿಯೂ ಚಿಂತೆಯಲ್ಲಿ ಇರುತ್ತೇನೆ. ನಿನಗೆ ಹೀಗೆ ಇರಲು ಹೇಳಿ ಕೊಟ್ಟವರು ಯಾರು? ಯಾರು ನಿನ್ನ ಗುರು?’ ಎಂದು
ಆಗ ಆ ಅವಧೂತ, ’ಪ್ರಕೃತಿಯೇ ನನ್ನ ಗುರು; ೨೪ ಗುರುಗಳು ನನಗೆ ಇದ್ದಾರೆ. ಅವರಿಂದ ನಾನು ಕಲಿತೆ’ ಎಂದು ಹೇಳುತ್ತಾನೆ.
ಸೂರ್ಯ, ಚಂದ್ರ, ಸಮುದ್ರ, ಒಂದು ಮಗು, ಮುಂತಾದ ೨೪ ಗುರುಗಳನ್ನು ತಿಳಿಸುತ್ತಾನೆ. ಒಬ್ಬೊಬ್ಬರಿಂದ ಒಂದೊಂದು ಕಲಿತೆ ಎಂದು ಹೇಳುತ್ತಾನೆ.
ಅಲ್ಲಿ ಒಂದು ಹೆಣ್ಣು ನನ್ನ ಗುರು. ಅವಳಿಂದ ನಾನು ಕಲಿತೆ ಎಂದು ಆ ಕಥೆಯನ್ನು ಹೇಳುತ್ತಾನೆ.

ಆ ಕಥೆಯಲ್ಲಿ, ಒಂದು ಮನೆಗೆ ಒಬ್ಬ ಅತಿಥಿ ಬರುತ್ತಾನೆ. ಆಗ ಆ ಮನೆಯಲ್ಲಿ ಕೇವಲ ಒಬ್ಬ ಹೆಣ್ಣು ಮಗಳು ಇರುತ್ತಾಳೆ. ಆ ಅತಿಥಿಗೆ ಅಡುಗೆ ತಯಾರಿ ಮಾಡಬೇಕಾಗಿರುತ್ತದೆ. ಆಗ ಅವಳು ಆತನನ್ನು ಹೊರಗೆ ಕೂರಿಸಿ, ಕೋಣೆಯಲ್ಲಿ ಭತ್ತ ಕುಟ್ಟಿ ಅಡುಗೆ ಮಾಡಲು ಶುರು ಮಾಡುತ್ತಾಳೆ. ಆಗ ಅವಳು ತೊಟ್ಟ ಬಳೆಗಳು ಝಲ್-ಝಲ್ ಶಬ್ದ ಮಾಡುತ್ತವೆ. ಆ ಶಬ್ದದಿಂದ ಆ ಅತಿಥಿಗೆ ತಾನು ಕೆಲಸ ಮಾಡುವುದು, ಭತ್ತ ಕುಟ್ಟುವುದು ತಿಳಿಯುವುದು ಎಂದು ಆಕೆಗೆ ಕಳವಳ ಆಗುತ್ತದೆ. ಆಗ ಅವಳು ಆ ಶಬ್ದ ಬರಬಾರದು ಎಂದು, ತಾನು ತೊಟ್ಟುಕೊಂಡಿದ್ದ ಸುಮಾರು ಬಳೆಗಳನ್ನು ತೆಗೆಯುತ್ತಾಳೆ. ತನ್ನ ಎರಡು ಕೈಗಳಿಗೆ ಕೇವಲ ಎರಡೆರೆಡರು ಬಳೆಗಳನ್ನು ತೊಟ್ಟು ಕೆಲಸ ಮಾಡಲು ಶುರು ಮಾಡುತ್ತಾಳೆ.
ಆದರೂ, ಸಣ್ಣದಾದ ಶಬ್ದವಾಗುತ್ತಾ ಇರುತ್ತದೆ.
ಕಡೆಗೆ ಮತ್ತೂ ಎರಡು ಬಳೆಗಳನ್ನು ತೆಗೆದು ಬಿಡುತ್ತಾಳೆ. ಒಂದೊಂದು ಕೈಗೆ ಒಂದೊಂದೆ ಬಳೆ ತೊಟ್ಟುಕೊಂಡು ಕೆಲಸ ಮಾಡುತ್ತಾಳೆ. ಯಾವ ಶಬ್ದವು ಆಗುವುದಿಲ್ಲ.

ಇದರಿಂದ ಅವಧೂತನು ಕಲಿತದ್ದು ಏನೆಂದರೆ, ಸುಮಾರು ಬಳೆಗಳಿದ್ದಾಗ ಜೋರಾಗಿ ಶಬ್ದವಾಗುತ್ತಾ ಇರುವಂತೆ. ಹೆಚ್ಚು ಜನರಿದ್ದಾಗ ಬರೀ ಕೋಪ-ತಾಪ-ಜಗಳ ಇವುಗಳೆ ಇರುತ್ತವೆ.
ಇಬ್ಬರೇ ಇದ್ದರೂ, ಏನೊ ಒಂದು ಕಷ್ಟ-ಸುಖ ಮಾತಾಡಿಕೊಳ್ಳುತಾ ಇರುತ್ತೇವೆ. ’ಕಾಡು ಹರಟೆ -ಪಂಚಾಯಿತಿ’ ವಿಷಯಗಳಲ್ಲಿ ಇರುತ್ತೇವೆ. ಅದೇ ಒಬ್ಬರೇ ಇದ್ದಾಗ, ಯಾವ ಜಂಜಾಟವಿಲ್ಲದೇ ನಾವು ಕಾರ್ಯಮಗ್ನರಾಗುತ್ತೇವೆ. ದೇವರ ಕಡೆ ಹೊರಳುತ್ತೇವೆ.
’ಅರತಿರ್ಜನಸಂಸದಿ’



No comments: